ತುಂಬಲೂರಾಚಾರ್ಯ		
	ಶ್ರೇಷ್ಠ ಜೈನ ವ್ಯಾಖ್ಯಾನಕಾರ. ಈತನ ಹೆಸರಿಗೆ ಪರ್ಯಾಯವಾಗಿ ತೆಂಬುಳೂರಾಚಾರ್ಯ, ತುಂಬುಳೂರುಚಾರ್ಯ, ತೆಂಬಳೂರನಾಮಾಚಾರ್ಯ, ತುಂಬಳೂರ ನಾಮಾಚಾರ್ಯ-ಎಂಬವೂ ದೊರೆಯತ್ತವೆ. ಈತ ಪಂಪ ಪೂರ್ವಯುಗದಲ್ಲಿ ಅಂದರೆ, ಕವಿರಾಜಮಾರ್ಗದ ಎಡ ಬಲದಲ್ಲಿ ಇದ್ದಿರಬಹುದು. ಇವನ ಕಾಲ ಕ್ರಿ.ಶ. ಸು. 650 ಎಂದು ಆರ್. ನರಸಿಂಹಾಚಾರ್ಯರ ಮತ. ಪಂಪನ ಕಾಲದಲ್ಲಿ ಕನ್ನಡ ಸಾಹಿತ್ಯದ ಕೃಷಿ ಹುಲುಸಾಗಿ ಬೆಳೆಯಲು ಕಾರಣರಾದವರಲ್ಲಿ ಇವನೂ ಒಬ್ಬ. ಇವನ ತಂದೆ ತಾಯಿ ಗುರುಪರಂಪರೆಗಳ ಬಗ್ಗೆ ಇಲ್ಲಿಯ ವರೆಗೆ ಏನೂ ತಿಳಿದುಬಂದಿಲ್ಲ. ದೇವಚಂದ್ರ ತನ್ನ ರಾಜಾವಳಿ ಕಥೆಯಲ್ಲಿ ತಂಬಲೂರಲ್ಲಿ ಹುಟ್ಟಿದ ತಂಬಲೂರು ನಾಮಾಚಾರ್ಯರ್ ಎಂದೂ ಇಂದ್ರನಂದಿ ಎಂಬ ಸಂಸ್ಕøತ ಕವಿ ತನ್ನ ಶ್ರುತಾವತಾರದಲ್ಲಿ ತುಂಬಲೂರ ನಾಮಾಚಾರ್ಯೋsಭೂತ್ತುಂಬಲೂರ ಸದ್ಗ್ರಾಮೇ ಷಷ್ಠೇನ ವಿನಾ ಖಂಡೇನ ಸೋಪಿ ಸಿದ್ಧಾಂತಯೋರುಭಯೋಃ-ಎಂದೂ ಹೇಳಿರುವುದರಿಂದ ಇವನ ಊರು  ತುಂಬಲೂರು ಎಂಬುದು ನಿರ್ವಿವಾದ. ಊರ ಹೆಸರಿನಿಂದ ಪ್ರಸಿದ್ಧನಾಗಿರುವ ಈತನ ನಿಜವಾದ ಹೆಸರು ಬೇರೆಯೇ ಇರಬಹುದೆಂದು ಎಂ.ಎಂ. ಕಲಬುರ್ಗಿಯವರ ಅಭಿಪ್ರಾಯ. ತುಂಬಲೂರಾಚಾರ್ಯ ಚೂಡಾಮಣಿ ಎಂಬ ವ್ಯಾಖ್ಯಾನಗ್ರಂಥವೊಂದನ್ನು ಬರೆದಿರುವುದಾಗಿ ಕನ್ನಡ ವೈಯಾಕರಣಿ ಭಟ್ಟಾಕಳಂಕನೂ ಕವಿ ತುಂಬಲೂರಲ್ಲಿ ಹುಟ್ಟಿದ ತುಂಬಲೂರು ನಾಮಾಚಾರ್ಯರ್ ಪ್ರಾಕೃತ ಸಂಸ್ಕøತ ಕರ್ಣಾಟಾದಿ ಭಾಷೆಗಳಿಂದ ಸಿದ್ಧಾಂತಪ್ರಬಂಧ ಕರ್ತೃಗಳ್ ಚೂಡಾಮಣಿ ವ್ಯಾಖ್ಯಾನ ಚತುರಶೀತಿ ಸಹಸ್ರ ಗ್ರಂಥರಚನೆಯಂ ಮಾಡಿದರ್----ತುಂಬಲೂರುನಾಮಾಚಾರ್ಯರ್ ಎಂಬತ್ತುನಾಲ್ಕು ಸಾಸಿರ ಗ್ರಂಥಕರ್ತೃಗಳಾಗಿ ಕರ್ಣಾಟಕ ಭಾಷೆಯಿಂದ ಚೂಡಾಮಣಿ ವ್ಯಾಖ್ಯಾನಮಂ ಮಾಡಿದರ್ ಎಂಬುದಾಗಿ ಕವಿ ದೇವಚಂದ್ರನೂ ಹೇಳಿದ್ದಾರೆ. ಸಂಸ್ಕøತದ ತತ್ತ್ವಾರ್ಥ ಮಹಾಶಾಸ್ತ್ರ ಎಂಬ ಗ್ರಂಥಕ್ಕೆ ಇದು ಕನ್ನಡ ವ್ಯಾಖ್ಯಾನ ಇದರ ಪರಿಮಿತಿ 96,000 ಗ್ರಂಥಗಳೆಂದು ಭಟ್ಟಾಕಳಂಕನೂ 84,000 ಗ್ರಂಥಗಳೆಂದು ದೇವಚಂದ್ರನೂ ಹೇಳುತ್ತಾರೆ. ಆದ್ದರಿಂದ ಇಂಥ ಒಂದು ಬೃಹತ್ತಾದ ಮಹತ್ತಾದ ವ್ಯಾಖ್ಯಾನ ಗ್ರಂಥ ಆ ಕಾಲದಲ್ಲಿಯೇ ಕನ್ನಡದಲ್ಲಿ ರಚಿತವಾಗಿತ್ತೆಂದು ತಿಳಿದುಬರುತ್ತದೆ. ಇಂಥ ಮಹತ್ವದ ಕೃತಿ ಅನುಪಲಬ್ಧವಾಗಿರುವುದು ಶೋಚನೀಯ.
                          								  (ಎಂ.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ